ಕೃಷ್ಣರಾಜನಗರ
ಮೈಸೂರು ಜಿಲ್ಲೆಯ ವಾಯುವ್ಯ ಭಾಗದ ತಾಲ್ಲೂಕು; ಆ ತಾಲ್ಲೂಕಿನ ಕೇಂದ್ರ.  ದಕ್ಷಿಣದಲ್ಲಿ ಹುಣಸೂರು ತಾಲ್ಲೂಕು, ಆಗ್ನೇಯದಲ್ಲಿ ಮೈಸೂರು ತಾಲ್ಲೂಕು, ಪೂರ್ವದಲ್ಲಿ ಕೃಷ್ಣರಾಜಸಾಗರ ಜಲಾಶಯ, ಉತ್ತರದಲ್ಲಿ ಹಾಸನ ಮತ್ತು ಮಂಡ್ಯ ಜಿಲ್ಲೆಗಳು ಮತ್ತು ಪಶ್ಚಿಮದಲ್ಲಿ ಪಿರಿಯಾಪಟ್ಟಣ ತಾಲ್ಲೂಕು-ಇವು ತಾಲ್ಲೂಕಿನ ಮೇರೆUsÀಳು.  ವಿಸ್ತೀರ್ಣ 231ಚ.ಮೈ.  ಪಶ್ಚಿಮದಿಂದ ಪೂರ್ವಾಭಿಮುಖವಾಗಿ ತಾಲ್ಲೂಕು ಇಳಿಜಾರಾಗಿದೆ.  ಎತ್ತರದ ಬೆಟ್ಟಗಳಾಗಲಿ, ಕಾಡುಗಳಾಗಲಿ ಹೆಚ್ಚಾಗಿಲ್ಲ.  ಎತ್ತರದ ಪ್ರದೇಶಗಳಲ್ಲಿ ಕಿರಿ ಪೊದೆಗಳು ತಗ್ಗಿನ ಮುಳ್ಳಿನ ಗಿಡಗಳೂ ಇವೆ.  ಅಲ್ಲಲ್ಲಿ ಕಣಿವೆಗಳಲ್ಲಿ ತೋಪುಗಳುಂಟು.  ಇಲ್ಲಿಯ ಮಣ್ಣು ಕಪ್ಪುಮಿಶ್ರಿತ ಕಂದು ಜೇಡಿಮಣ್ಣು.  ಮಣ್ಣಿನ ಗುಣದಲ್ಲಿ ವ್ಯತ್ಯಾಸವಿದ್ದರೂ ನೀರಾವರಿಯ ಅನುಕೂಲವಿರುವೆಡೆಯಲ್ಲಿ ಇದನ್ನು ವ್ಯವಸಾಯಕ್ಕೆ ಚೆನ್ನಾಗಿ ಅಳವಡಿಸಿಕೊಳ್ಳಲಾಗಿದೆ.  ತಾಲ್ಲೂಕಿನ ಉತ್ತರಭಾಗದಲ್ಲಿ ಅತ್ಯಂತ ಪ್ರಾಚೀನವಾದ ಧಾರವಾಡ ಪದರಶಿಲೆಗಳಿವೆ.  ಉಳಿದ ಭಾಗಗಳು ಪರ್ಯಾಯ ದ್ವೀಪೀಯ ನೈಸ್ ಶಿಲೆಯಿಂದ ಕೂಡಿವೆ.  ತಾಲ್ಲೂಕಿನ ಉಷ್ಣತೆ ಚಳಿಗಾಲದಲ್ಲಿ 65(ಪ್ಯಾ.- 67(ಪ್ಯಾ, ಬೇಸಗೆಯಲ್ಲಿ 80(ಪ್ಯಾ,.- 85(ಪ್ಯಾ,  ಇದು ವ್ಯವಸಾಯಕ್ಕೆ ಅನುಕೂಲವಾದುದು.  ಗರಿಷ್ಠ ಕನಿಷ್ಠ ಉಷ್ಣತೆಗಳು ಅನುಕ್ರವiವಾಗಿ ಏಪ್ರಿಲ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿರುತ್ತವೆ.  ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲಿ ಸಾಮಾನ್ಯವಾಗಿಯೂ ಅಕ್ಟೋಬರಿನಲ್ಲಿ ಹೆಚ್ಚಾಗಿಯೂ ಮುಂಗಾರು ಮಳೆಯಾಗುತ್ತದೆ.   ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 27-30.

	ಕಾವೇರಿನದಿ ಈ ತಾಲ್ಲೂಕಿನ ನಡುವೆ ಪ್ರವಹಿಸುತ್ತದೆ.  ಚುಂಚನಕಟ್ಟೆಯ ಬಳಿ ಇಕ್ಕಟ್ಟಾದ ಕಣಿವೆಯಲ್ಲಿ ಬಂಡೆಗಳ ಮೇಲಿಂದ ದುಮುಕಿ ಮುಂದೆ ಹೇಮಾವತಿ ಮತ್ತು ಲಕ್ಷ್ಮಣತೀರ್ಥದೊಂದಿಗೆ ಕೂಡಿಕೊಳ್ಳುತ್ತದೆ.  ಕೃಷ್ಣರಾಜಸಾಗರ ಕಟ್ಟೆಯನ್ನು ನಿರ್ಮಿಸಲಾಗಿರುವುದು ಅಲ್ಲೇ.  ಆ ಕಟ್ಟೆ ಮಂಡ್ಯ ಜಿಲ್ಲೆಯಲ್ಲಿದೆಯಾದರೂ ಜಲಾಶಯದ ನೀರು ಕೃಷ್ಣರಾಜ ನಗರದ ಭಾಗದಲ್ಲೂ ಹರಡಿದೆ.  

	ಕಾವೇರಿಯ ಆಣೆಕಟ್ಟುಗಳಿಂದ ಈ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಒದಗಿ ಬಂದಿದೆ.  ಕಾಲುವೆಗಳ ಒಟ್ಟು ಉದ್ದ 100 ಮೈಲಿಗಿಂತಲೂ ಮಿಗಿಲು.  

	ಈ ತಾಲ್ಲೂಕಿನ ಮುಖ್ಯ ಬೆಳೆ ಭತ್ತ.  ಕಬ್ಬಿನ ಬೆಳೆ ಈಚೆಗೆ ರೂಢಿಗೆ ಬರುತ್ತಿದೆ.  ರಾಗಿ ಇಲ್ಲಿಯ ಮುಖ್ಯ ಖುಷ್ಕಿ ಬೆಳೆ.  ಎಣ್ಣೆಬೀಜಗಳು, ದ್ವಿದಳ ದಾನ್ಯಗಳು; ಮತ್ತು ಹೊಗೆಸೊಪ್ಪು ಇತರ ಬೆಳೆಗಳು.  ಭತ್ತಕ್ಕೆ ಒಳ್ಳೆಯ ಬೆಲೆ ಬರುತ್ತಿರುವುದರಿಂದ ಅಡಿಕೆ ತೋಟಗಳನ್ನು ಭತ್ತದ ಗದ್ದೆಗಳಾಗಿ ಪರಿವರ್ತಿಸುತ್ತಿದ್ದಾರೆ.  ತೋಟದ ಬೆಳೆಗಳೆಂದರೆ ಬಾಳೆ, ವೀಳಯದೆಲೆ, ಗೆಣಸು ಮತ್ತು ತರಕಾರಿಗಳು.  

	ಈ ತಾಲ್ಲೂಕಿನಲ್ಲಿ ಅನೇಕ ಗೃಹ ಕೈಗಾರಿಕೆಗಳುಂಟು.  ಅಲ್ಲಲ್ಲಿ ಹತ್ತಿ ಬಟ್ಟೆ. ಮತ್ತು ಕಂಬಳಿಗಳನ್ನು ತಯಾರಿಸುತ್ತಾರೆ.  ಚುಂಚನಕಟ್ಟೆಯಲ್ಲಿ ಜನವರಿ ತಿಂಗಳಿನಲ್ಲಿ ದೊಡ್ಡ ಜಾತ್ರೆಯಾಗುತ್ತದೆ.  ದನಗಳ ಪ್ರದರ್ಶನ ಈ ಜಾತ್ರೆಯ ಮುಖ್ಯ ಆಕರ್ಷಣೆ.

	ಮೈಸೂರು-ಹಾಸನ ರೈಲು ಮತ್ತು ರಸ್ತೆ ಮಾರ್ಗಗಳು ಈ ತಾಲ್ಲೂಕಿನ ಮುಖಾಂತರ ಹಾದು ಹೋಗುತ್ತವೆ.  ಕೃಷ್ಣರಾಜನಗರದಿಂದ ನೆರೆಯ ತಾಲ್ಲೂಕು ಕೇಂದ್ರಗಳಿಗೆ ರಸ್ತೆ ಮಾರ್ಗಗಳಿವೆ.  ಕೃಷ್ಣರಾಜನಗರ, ಮಿರ್ಲೆ, ಸಾಲಿಗ್ರಾಮ, ಹೊಸ ಅಗ್ರಹಾರ ಮತ್ತು ಹೆಬ್ಬಾಳು ಈ ತಾಲ್ಲೂಕಿನ ಮುಖ್ಯ ಸ್ಥಳಗಳು.  

	ಕೃಷ್ಣರಾಜನಗರ ಈ ತಾಲ್ಲೂಕಿನ ಕೇಂದ್ರ ಮತ್ತು ಧಾನ್ಯ ರವಾನೆ ಕೇಂದ್ರ. ಈ ತಾಲ್ಲೂಕಿನ ಜನಸಂಖ್ಯೆ 2,39,155 (2001) ಹಾಗೂ ಪಟ್ಟಣದ ಜನಸಂಖ್ಯೆ 30,603 (2001).  ಇದು ಸಾರಿಗೆ ಮಾರ್ಗಗಳ ಕೇಂದ್ರವೂ ಹೌದು.  ಹಳೆಯ ಊರು ಕಾವೇರಿ ನದಿಯ ದಂಡೆಯಲ್ಲಿ, ಅದು ಎಡಕ್ಕೆ ತಿರುಗುವಲ್ಲಿ ಇತ್ತು.  ಆದ್ದರಿಂದ ಅದಕ್ಕೆ ಎಡತೊರೆಯೆಂಬ ಹೆಸರು ಬಂದಿತ್ತು.  ಅಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಅರ್ಕೇಶ್ವರ ದೇವಸ್ಥಾನವಿದೆ.  11ನೆಯ ಶತಮಾನದಲ್ಲಿ ಗಂಗರನ್ನು ಸೋಲಿಸಿ ರಾಜೇಂದ್ರ ಚೋಳ ಈ ಸ್ಥಳವನ್ನು ವಶಪಡಿಸಿಕೊಂಡಿದ್ದ.  ಈ ಪಟ್ಟಣ ಪದೇಪದೇ ಕಾವೇರಿ ನದಿಯ ಪ್ರವಾಹಕ್ಕೆ ತುತ್ತಾಗುತ್ತಿತ್ತು.  ಕೃಷ್ಣರಾಜಸಾಗರದ ನಿರ್ಮಾಣವಾದ ಮೇಲೆ ಅದರಿಂದ ಈ ಪಟ್ಟಣದ ಒಂದು  ಭಾಗದ ಮುಳುಗಡೆಯಾದುದರಿಂದ ಹೊಸ ಪಟ್ಟಣವನ್ನು ಹಳೆಯ ಊರಿಗೆ ಎರಡು ಮೈ. ದೂರದಲ್ಲಿ ಎತ್ತರವಾದ ಸ್ಥಳದಲ್ಲಿ ನಿರ್ಮಿಸಲಾಯಿತು.  ಆಗ ಇದರ ಹೆಸರು ಕೃಷ್ಣರಾಜನಗರ ಎಂದಾಯಿತು.  ಇಲ್ಲಿ ನಿಯಂತ್ರಿತ ಮಾರುಕಟ್ಟೆಯೂ ಶಾಲಾ ಕಾಲೇಜುಗಳು ನ್ಯಾಯಾಲಯ ಮತ್ತು ಆಸ್ಪತ್ರೆಗಳು ಇವೆ.  ಪ್ರತಿ ಶುಕ್ರವಾರ ಇಲ್ಲಿ ಸಂತೆ ನಡೆಯುತ್ತದೆ.  		
	                  (ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ